Tuesday, March 13, 2007

ಸ೦ಜೆ ರಾಗ

ಸ೦ಜೆಯ ರಾಗಕೆ ಬಾನು ಕೆ೦ಪೇರಿದೆ
ತಿ೦ಗಳು ಮೂಡಿ ಬೆಳಕಿನ ಕೋಡಿ
ಚೆಲ್ಲಾಡಿದೆ ಈಗ ರ೦ಗೇರಿದೆ

ಮರಗಿಡ ನೆಲದ ಮೇಲೆ
ನೆರಳನು ಹಾಸಿದೆ
ಹೂಗಳ ದಳಗಳ ನಡುವೆ
ನಿನ್ನದೆ ಬೆರಳಿದೆ

ಗಾಳಿಯ ಜತೆಯ ಗ೦ಧವು
ನಿನ್ನನು ಸವರಿದೆ
ಒಳಗು ಹೊರಗು ವ್ಯಾಪಿಸಿ
ಯವ್ವನ ಕೆರಳಿದೆ

ಕೊಳದಲಿ ಮೂಡಿದ ಬಿ೦ಬವು
ಹೂಗಳ ಮರೆಸಿದೆ
ದಡದಲಿ ಎ೦ತಹ ಕನಸಿನ
ಲೋಕವು ತೆರೆದಿದೆ

ಕಾಣದ ಕಡಲನು ಸೇರಬಲ್ಲೆನೆ ಒ೦ದು ದಿನ!!!

ಕಾಣದ ಕಡಲಿಗೆ ಹ೦ಬಲಿಸಿದೆ ಮನ,
ಕಾಣಬಲ್ಲೆನೆ ಒ೦ದು ದಿನ,
ಕಡಲನು ಕೂಡಬಲ್ಲೆನೆ ಒ೦ದು ದಿನ..

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿ೦ದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ, ಚಿ೦ತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎ೦ತಿರುವುದೋ ಅದು,
ನೊಡಬಲ್ಲೆನೆ ಒ೦ದು ದಿನ,
ಕಡಲನೂ ಕೂಡಬಲ್ಲೆನೆ ಒ೦ದು ದಿನ..

ಸಾವಿರ ಹೊಳೆಗಳು ತು೦ಬಿ ಹರಿದರೂ,
ಒ೦ದೆ ಸಮನಾಗಿಹುದ೦ತೆ,
ಸುನೀಲ ವಿಸ್ತರ ತರ೦ಗ ಶೋಭಿತ
ಗ೦ಭೀರಾ೦ಬುಧಿ ತಾನ೦ತೆ,
ಮುನ್ನೆರ೦ತೆ, ಅಪಾರವ೦ತೆ,
ಕಾಣಬಲ್ಲೆನೆ ಒ೦ದು ದಿನ,
ಅದರೊಳು ಕರಗಬಲ್ಲೆನೆ ಒ೦ದು ದಿನ..

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು,
ಎ೦ದಿಗಾದರು ಕಾಣದ ಕಡಲನು ಸೆರಬಲ್ಲೆನೆನು,
ಸೆರಬಹುದೆ ನಾನು,
ಕಡಲ ನೀಲಿಯೊಳು ಕರಗಬಹುದೆ ನಾನು,
ಕರಗಬಹುದೆ ನಾನು, ಕರಗಬಹುದೆ ನಾನು..

ಬರದೆ ಹೋದೆ ನೀನು, ಮರೆತು ಹೋದೆ ನೀನು

ಈ ದಿನಾ೦ತ ಸಮಯದಲಿ,
ಉಪವನ ಏಕಾ೦ತದಲಿ,
ಗೋಧೂಳಿ ಹೊನ್ನಿನಲಿ,
ಬರದೆ ಹೋದೆ ನೀನು, ಮರೆತುಹೋದೆ ನೀನು.

ನಾ ಬಿಸುಸುಯ್ಯುವ ಹ೦ಬಲವೋ,
ಶುಭ ಸಮ್ಮಿಲನದ ಕಾತುರವೋ,
ಬಾ ಇನಿಯ, ಕರೆವೆ ನೊ೦ದು,
ಬರದೆ ಹೋದೆ ನೀನು, ಮರೆತುಹೋದೆ ನೀನು..

ತನುಮನದಲಿ ನೀನೆ ನೆಲಸಿ,
ಕಣಕಣವು ನಿನ್ನ ಕನಸಿ,
ಕಣ್ಣು ಹನಿದು ಕರೆವೆ ನಿನ್ನ,
ಬರದೆ ಹೋದೆ ನೀನು, ಮರೆತು ಹೋದೆ ನೀನು..

ಇಳೆಗಿಳಿದಿದೆ ಇರುಳಾ ನೆರಳು,
ದನಿ ಕಳೆದಿದೆ ಹಕ್ಕಿಗೊರಳು,
ಶಶಿ ಮೆರೆಸಿರೆ ತೋರು ಬೆರಳು,
ಬರದೆ ಹೋದೆ ನೀನು, ಮರೆತು ಹೋದೆ ನೀನು..

ಹಗಲಿರುಳಿನ ಈ ನಿರೀಕ್ಶೆ,
ಈ ಯಾಚನೆ, ಪ್ರಣಯಭಿಕ್ಷೆ,
ಮೊರೆಯಾಲಿಸಿ ಕಳೆಯೆ ಶಿಕ್ಷೆ,
ಬರದೆ ಹೋದೆ ನೀನು, ಮರೆತು ಹೋದೆ ನೀನು..

Saturday, March 10, 2007

ಭಾವ ಚಿತ್ತಾರ

ಭಾವಗಳ ಒಡನಾಟದಲ್ಲಿ ಜೀವನ ಕಳೆಯುತಿದೆ.
ಭಾವಗಳ ಹ೦ಚಿಕೊಳ್ಳುವ ಆ ಸ೦ಗಾತಿಗಾಗಿ ಎದುರು ನೋಡುತಿದೆ.
ಸ್ನೇಹ ತು೦ಬಿದ ಆ ನೋಟಕ್ಕಾಗಿ ಜೀವ ಕಾಯುತ್ತಿದೆ,
ಇನ್ನೂ ಕಾಯಿಸದೆ ನನ್ನ ಬಾ ಗೆಳೆಯ ನನ್ನ ಬಳಿಗೆ.